Saturday, November 15, 2008

ಈಜು ಹಾಗು ಮೋಜು - ಒಂದು ಸುಂದರ ಬಾಲ್ಯದ ತುಣುಕು!!!

ವಯಸ್ಸು ಸುಮಾರು ಆರರಿಂದ ಏಳು ಇರಬಹುದು, ವಯಸಿಗೆ ತಕ್ಕ ತುಂಟಾಟ ಹಾಗು ನೀರಿನ ಮೋಹ. ನಿಮಗೂ ಅನುಭವಕ್ಕೆ ಬಂದಿರುತ್ತೆ ಅನ್ಕೊಂಡಿದ್ದೀನಿ ಚಿಕ್ಕ ಮಕ್ಕಳಿಗೆ ನೀರು ಅಂದ್ರೆ ಅದೇನೋ ವ್ಯಾಮೋಹ. ನನ್ನ ತಂಗಿ ಮಗ ಹಾಗು ನನ್ನ ಅಣ್ಣನ ಮಕ್ಕಳನ್ನ ಎರಡು ಬಾರಿ ನಮ್ಮನೆ ಚಿಕ್ ಟ್ಯಾಂಕ್ನಿಂದ ಎತ್ತಿ ಪ್ರಾಣ ಉಳಿಸಿದ್ದಾಗಿದೆ. ಈ ವಿಚಾರ ಯಾಕೆ ಅಂದ್ರೆ ನನ್ನ ಈಜು ಕಲಿತ ಮೋಜಿನ ಬಗ್ಗೆ ನಿಮಗೆ ಮುನ್ನುಡಿ ಬರೀತಾ ಇದ್ದೀನಿ. ನಮ್ಮೂರಿಗೆ ಒಂದು ಮೆರುಗು ಬಂದಿದ್ದೆ ಆ ತೊರೆ ಹಳ್ಳದಿಂದ ಜೊತೆಗೆ ಅದಕೊಂದು ಗುಡಿ ಕಟ್ಟಿ ಅದಕ್ಕೆ ತೊರೆಯಮ್ಮ ಎಂದು ಹೆಸರಿಟ್ಟು ಪೂಜೆ ಮಾಡೋದು ನಮ್ಮ ಸಂಸ್ಕೃತಿಯ ಕೃತಜ್ಞತೆಯ ಭಾಗ. ಎಷ್ಟು ಸೋಜಿಗ ಹಾಗು ಎಂಥಾ ಭಾವ ಕೃತಜ್ಞತೆ ನಮ್ಮ ಪ್ರಕೃತಿಗೆ ನಮ್ಮ ಜನರಿಂದ.

ಇವತ್ತಿನ ಧರ್ಮ ರಾಜಕೀಯಕ್ಕೆ ಎಂತಹ ಮುಲಾಮು ಈ ಪ್ರಕೃತಿ ಪೂಜೆ. ಶ್ರಮಿಕರು, ಕಾರ್ಮಿಕರು, ರೈತರು ಇವತ್ತಿಗೂ ಪ್ರಕ್ರುತ್ತಿಯನ್ನ ಪೂಜಿಸ್ತಾರೆ ಜೊತೆಗೆ ಅದೇ ಅವರ ದೇವರು. ಪ್ರಕೃತಿಯೇ ದೇವರು ಎಂತಹ ಸುಂದರ ಕಲ್ಪನೆ ಅಲ್ವ. ಹೊಟ್ಟೆ ತುಂಬಿದವರು, ಧನದ ಮಧ ಉಳ್ಳವರು, ಅಧಿಕಾರ ವ್ಯಾಮೋಹ ಉಳ್ಳವರು ಹಾಗು ಸಮಾಜ ಕಂಟಕರಿಗೆ ಮಾತ್ರ ವ್ಯಕ್ತಿ ಆಧಾರಿತ ದೇವರು ಹಾಗು ಧರ್ಮದ ಕಲ್ಪನೆ. ಪರರಿಗೆ ಉಪಕಾರ ಮಾಡೋ ವಸ್ತು ಹಾಗು ಜೀವಿಗಳು ಮಾತ್ರ ದೇವರ ಸ್ಥಾನಕ್ಕೆ ಅರ್ಹ ಮತ್ತೆಲ್ಲೆವು ಕೇವಲ ಡೋಂಗಿ ಮತ್ತು ಮನುಷ್ಯ ಆಧಾರಿತ ಅತಿರೇಕ ಆಚರಣೆಗಳು. ಈಜು ಹಾಗು ಮೋಜು ಧರ್ಮದ ಹಾದಿ ಹಿಡಿದದಕ್ಕೆ ಕ್ಷಮೆ ಇರಲಿ. ಮತ್ತೆ ಮೋಜಿನ ವಿಚಾರಕ್ಕೆ ಈಜಿ ವಾಪಸ್ ಬರೋಣ ಏನಂತೀರ...

ಮೇಲೆ ಹೆಸರಿಸಿದ ತೊರೆ ಹಳ್ಳ ನಮ್ಮ ಊರಿಗೆ ಒಂದು ಪುಟ್ಟ ನದಿಯ ಕಲ್ಪನೆ ಹಾಗು ಹಳ್ಳಿ ಮಕ್ಕಳ ಸ್ವರ್ಗ. ಈ ಪುಟ್ಟ ನದಿಯ ದಂಡೆ ಜೊತೆಗೆ ನೀರಿನ ಸೆಲೆ, ಸುತ್ತಮುತ್ತಲಿನ ಗಿಡಮರಗಳು, ಹಕ್ಕಿ ಪಕ್ಷಿಗಳ ಕಲರವ ಹಾಗು ನದಿ ಹಾದಿಯ ಸೊಬಗು ಎಂಥವರನ್ನು ಮಂತ್ರ ಮುಗ್ಧರನ್ನಗಿಸುತ್ತದೆ. ಇನ್ನು ಮಕ್ಕಳ ಮನಸಿಗೆ ಹಾಗು ಅವರ ಭಾವನೆಗಳಿಗೆ ಇದು ಸ್ವರ್ಗವೇ ಸರಿ. ಹಾಂ ಹೇಳೋದೇ ಮರತೇ ನಿಮಗೆ ಬಿಳಿ ಚಿನ್ನದ ಕಣಗಳು ಬಗ್ಗೆ ಗೊತ್ತ!! ನದಿ ಹಾಗು ಸಮುದ್ರ ತೀರದ ಅವಿಭಾಜ್ಯ ಅಂಗ, ಗೊತ್ತಾಗ್ಲಿಲ್ವಾ ಅದೇ ಕಣ್ರೀ ಮಕ್ಕಳ ಪಾಲಿನ ಬಿಳಿ ಚಿನ್ನದ ಕಣಗಳು - ಮರಳು. ನೀರು ಹಾಗು ಮಣ್ಣು ಅದರಲ್ಲೂ ಮರಳು ಮಕ್ಕಳ ಮನಸಿನ ಸೋಜಿಗ ಅಲ್ವ. ಮಣ್ಣುನ ತಿಂದು, ಮರಳಲ್ಲಿ ಸ್ನಾನ ಮಾಡಿ ತಣ್ಣಿರಲ್ಲಿ ಮನಸೋ ಇಚ್ಛೆ ಆಟ ಅದದೇ ಇರೋ ಹಳ್ಳಿ ಮಕ್ಳೆ ಇಲ್ಲ ಅನ್ಕೊಂಡಿದ್ದೀನಿ.

ಹಾಗೆ ಇನ್ನೊಂದು ವಿಚಾರ, ನಮಗೆ ಈ ಪುಟ್ಟ ನದಿಯ ತಟ ಅಸ್ಟು ಸುಲಭವಾಗಿ ಸಿಗ್ತಿರ್ಲಿಲ್ಲ. ಶನಿವಾರ ಮಧ್ಯಾನ ಹಾಗು ಭಾನುವಾರ ಮಾತ್ರ ಅದು ಎಮ್ಮೆ ಮೆಯಿಸೋ ಕಾಯಕ ವಯಿಸ್ಕೊಂದ್ರೆ ಮಾತ್ರ. ಆ ಕಾಲಕ್ಕೇ ನಮ್ಮನೇಲಿ ಹದಿನೈದು ಎಮ್ಮೆಗಳು ಇದ್ವು. ಅವಗಳನ್ನ ಮೆಯಿಸೋದ್ದಕ್ಕೆ ಹಾಗು ನೋಡ್ಕೊಳ್ಳೋಕೆ ಒಬ್ಬ ಆಳು ಬೇರೆ, ಆದ್ರೆ ನಮ್ಮನೇಲಿ ತುಂಬಾ ಜನರಿದ್ದರಿಂದ ಆಳಿನ ಅವಶ್ಯಕತೆ ಇರ್ಲಿಲ್ಲ ಅನ್ಸುತ್ತೆ.ಆಮೇಲೆ ನೀವು ಯಾವಾಗ್ಲಾದ್ರು ಮಹೀಶನ ಸವಾರಿ ಮಾಡಿದ್ದೀರಾ, ಪ್ರಪಂಚದಲ್ಲಿ ಅತ್ಯಂತ ನಿಧಾನಗತಿಯ ಪ್ರಯಾಣ ಮಾಡಬೇಕು ಅಂತ ಅನಿಸಿದರೆ ಅದು ಮತ್ತ್ಯಾವುದೇ ವಾಹನದಲ್ಲಿ ಇದು ಸಾದ್ಯವಿಲ್ಲ, ಎಮ್ಮೆ ಸವಾರಿಗೆ ಸಾಟಿಯೇ ಇಲ್ಲ. ಎಮ್ಮೆ ಸವಾರಿ ಹಾಗು ಅದರ ಒಡನಾಟ ಅವಿಸ್ಮರಣೀಯ. ಈ ಸವಾರಿಯನ್ನ ಅಣ್ಣಾವ್ರು ಸಹ ಹಾಡಿ ಹೊಗಳಿದ್ದಾರೆ!!!!

ಹಳ್ಳಿ ಮಕ್ಳಿಗೆ ಮರ ಹತ್ತೋದು ಹಾಗು ಈಜು ವ್ಯಕ್ತಿತ್ವದ ಸಂಕೇತ. ನಾ ಕಂಡಂತೆ ನಮ್ಮನೆಯ ಎಲ್ಲಾ ಗಂಡು ಮಕ್ಕಳಿಗೂ ಈಜು ಬರ್ತಿತ್ತು ಅನಿಸುತ್ತೆ. ನಮ್ ತಂದೆ ಈಜಿದ್ದುನ್ನ ನಾನು ಒಂದೇ ಸಾರಿ ನೋಡಿರೋದು ಜೊತೆಗೆ ಅವರು ತುಂಬಾ ಚೆನ್ನಾಗಿ ಈಜ್ತಿದ್ರು ಅಂತ ಕೇಳಿದ್ದೆ. ಅವರ ಈಜುವ ಮೋಡಿ ನಮ್ಮ್ ಈಜು ಕಲಿತಕ್ಕೆ ಸ್ಪೂರ್ತಿ. ನಾ ಹೇಗೆ ಈಜು ಕಲಿತ್ತದ್ದು ಎಂದು ಹೇಳುವ ಪರಿಕಲ್ಪನೆಯೇ ಈ ಲೇಖನದ ಉದ್ದೇಶ. ನಾನು ಈಜು ಕಲಿತ್ತದ್ರಲ್ಲಿ ಅಂಥದೇನು ವಿಶೇಷ ಅಂತ ಕೇಳ್ತಾ ಇದ್ದೀರಾ, ಹಾಗೆ ಮುಂದೆ ಓದಿ ನಿಮಗೆ ಗೊತ್ತಾಗುತ್ತೆ.

ಆದಿನ ಭಾನುವಾರ, ತೊರೆ ಹಳ್ಳಕ್ಕೆ ಹೋಗ್ಬಹುದ್ದಲ್ಲ ಅನ್ನೋದೇ ತುಂಬಾ ಖುಷಿ. ಎಮ್ಮೆಗಳನ್ನ ಹೊಡ್ಕೊಂಡು ತುಂಬಾ ಉತ್ಸಾಹದಿಂದ ಬೇಗ ಬೇಗ ಹೆಜ್ಜೆ ಹಾಕ್ತಾ ಇದ್ವಿ ಆದ್ರೆ ಎಮ್ಮೆಗಳು ಮುಂದೆ ಸಾಗಬೇಕಲ್ಲ!!!! ಮನೆಯಿಂದ ತೊರೆ ತಲ್ಪೋದುಕ್ಕೆ ಎರಡು ಗಂಟೆ ಬೇಕಾಗಿತ್ತು ನಮಗೆ. ನಮ್ಮ ಪರಿಕಲ್ಪನೆಯ ಈ ಚಿಕ್ಕ ನದಿ ತುಂಬಾ ರಭಸವಗಿರ್ಲಿಲ್ಲ, ನಿಧಾನ ಗತಿಯ ಜುಳು ಜುಳು ಕಲರವದ ಪನ್ನೀರಿನ ಹೊಳೆ. ನಾವು ಈಜು ಕಲಿತ್ತದು ತೊರೆ ಹಳ್ಳದ ಒಂದು ಕಿರಿದಾದ ತೋಪಿನ ಮಧ್ಯ ಭಾಗ. ಸುತ್ತಮುತ್ತ ದೊಡ್ಡ ದೊಡ್ಡ ಮರಗಳು, ಮರಗಳ ಮಧ್ಯದ ಒಂದು ಮೂಲೆಯಲ್ಲಿ ಒಂದು ಪಂಪ್ಸೆಟ್ಟು ಮತ್ತು ತೊರೆಯಿಂದ ನೀರೆತ್ತೊದುಕ್ಕೆ ತೊರೆಯಲ್ಲಿ ಒಂದು ಹಳ್ಳ. ಈ ಹಳ್ಳದ ತುಂಬಾ ಬರಿ ಮರಳು, ಸಾಮನ್ಯವಾಗಿ ಪಂಪ್ಸೆಟ್ಟು ಇರೋರು ಈ ಮರಳಿನ ಗುಂಡಿನ ಯಾವಾಗಲು ತೊಡ್ತ್ಹ ಇರಬೇಕು ಇಲ್ಲಾಂದ್ರೆ ಗುಂಡಿ ಮುಚ್ಚೋಗುತ್ತೆ. ಈ ಗುಂಡಿಗಳು ಸಾಮನ್ಯವಾಗಿ ಬಟ್ಟಲು ಆಕಾರದಲ್ಲಿ ಇರುತ್ತೆ. ಮದ್ಯ ತುಂಬಾ ಆಳ ಇರುತ್ತೆ ಅಂಚಿಗೆ ಹೋಗ್ತಾ ಆಳ ಕಡಿಮೆ ಹಾಗ್ತ ಹೋಗುತ್ತೆ.

ಈಗ ಸಿನಿಮೀಯ ಮಾದರಿ ಕೌತುಕವನ್ನ ಬಹಿರಂಗ ಪಡಿಸುವ ಸಮಯ. ನಾನು ದಡದಲ್ಲಿ ಒಂದು-ಎರಡು ಅಡಿಗಳ ನೀರಿನ ಬದಿಯಲ್ಲಿ ಈಜು ಕಲಿತಿದ್ನೋ ಅಥವಾ ಮರಳು ಮೇಲೆ ಈಜೋ ಥರ ಅವಯವಗಳನು ಅಡಿಸ್ತಿದ್ನೋ ಗೊತ್ತಿಲ್ಲ. ಆದರೆ ನನ್ನಲ್ಲಿ ಈಜು ಕಲಿಯಲೇ ಬೇಕು ಇವತ್ತು ಅನ್ನೋ ಹಂಬಲ ಜಾಸ್ತಿ ಹಾಗಿದ್ದಂತು ನಿಜ. ಹಾಗೆ ದಡದಿಂದ ಸ್ವಲ್ಪ-ಸ್ವಲ್ಪ ಮುಂದೆ ಎರಡಾಳುದ್ದ ಇದ್ದ ಬಟ್ಟಲು ತರ ಇರೋ ಗುಂಡಿಗೆ ಜಾರಿದೆ. ಎಲ್ರು ಅವ್ರ ಈಜೋ ಕಡೆ ಗಮನ ಇತ್ತು ಅನ್ಸುತ್ತೆ, ನಾನು ಹಾಗೆ ಗುಂಡಿಗೆ ಜಾರಿದ್ದು ಯಾರು ಗಮನಿಸಲಿಲ್ಲ ಅನ್ಸುತ್ತೆ. ಗುಂಡಿಯ ಮಧ್ಯ ಭಾಗಕ್ಕೆ ಹೋಗಿದ್ದು ನಂಗೆ ಗೊತ್ತೇ ಹಾಗ್ಲಿಲ್ಲ. ನಾನು ಗುಂಡಿ ಒಳಗೆ ಹೋಗಿದ್ದು ಯಾರದ್ರು ನೋಡಿದ್ರೆ ನನ್ನನ್ ಕಾಪಡ್ತ್ಹಿದ್ರೋ ಏನೋ. ಗುಂಡಿ ಮಧ್ಯ ಏನು ತೋಚದೆ ನೀರು ಕುಡಿತ ಇದ್ದೆ. ಸ್ವಲ್ಪ ವಯಸ್ಸು ಜಾಸ್ತಿ ಇದ್ರೆ ಹೆದಿರ್ಥಿದ್ನೋ ಏನೋ ಆದರೆ ಆ ಚಿಕ್ಕ ವಯಸ್ಸು ಹೇಗೆ ಹೊರಗೆ ಬರೋದು ಅಂತ ಯೋಚಸ್ತ ಇತ್ತು. ಹಾಗ್ಲೆ ಸುಮಾರು ಭರ್ತಿಪೂರ ನೀರ್ ಕುಡ್ದಗಿತ್ತು, ಆರನೇ ಸ್ತುಪ್ಥ ಮನಸ್ಸಿಗೆ ಏನೋ ಮಿಂಚು ಬಂದಹಾಗೆ ಒಂದು ಉಪಾಯ ಹೊಳಿತ್ತು ನೋಡಿ, ನನ್ ಬದ್ಕ್ತೀನಿ ಅನ್ನೋ ಛಲ ಅಂತು-ಇಂತೂ ಬಂತು. ಅದೇನಂತ ಉಪಾಯ ಹೊಳಿದುದ್ದು ಅಂತೀರ? ಇಲ್ಲೇ ಇರೋದು ಕೌತುಕ. ನಾನು ಗುಂಡಿ ಮಧ್ಯದ ತನಕ ಹೆಗ್ಬಂದೆ ಅಂತ ಯೋಚನೆ ಮಾಡ್ದೆ. ಒಂದಂತು ಸತ್ಯ ನಾನು ಈಜೋಡ್ಕೊಂಡು ಅಲ್ಲಿವೆರ್ಗೆ ಕಂಡಿತ ಬಂದಿರಲಿಲ್ಲ, ಮತ್ತೆ? ಮರಳ ಮೇಲೆ ನೆಡದು ಬಂದಿದ್ದೆ. ದಡ ತಲ್ಪೋದುಕ್ಕೆ ಅದೇ ಸರಿಯಾದ ಮಾರ್ಗ ಅನ್ನಿಸ್ತು. ಉಪಾಯ ಹೊಳೆದುದ್ದೆ ತಡ ಒಂದೇ ಉಸಿರಿನಲ್ಲಿ ಮರಳ ಮೇಲೆ ಓಡದೆ ನೋಡಿ. ದಡ ತಲುಪಿ, ಉಸಿರಾಟ ಸರಾಗವದಗ್ಲೆ ಜೀವ ವಾಪಸ್ಸು ಬಂದಿದ್ದು. ನಾನು ಆಕಡೆ ದಡದಿಂದ ಈಕಡೆ ದಡ ತಲಪಿದ್ದು ನೋಡಿ ಎಲ್ರಿಗೂ ಆಶ್ಚರ್ಯ ಹಾಗು ಗಾಬರಿ. ಆಮೇಲೆ ಅಣ್ಣ ಬಂದು ನಾಲ್ಕು ಕೊಟ್ಟ ನೋಡಿ. ಆದ್ರೆ ವಿಪರ್ಯಾಸ ನೋಡಿ ಅವತ್ತೆ ನಂಗೆ ನೀರಿನ ಭಯ ಹೋಯ್ತು, ಮತ್ತೆಂದು ನೀರಿನ ಭಯ ಹಾಗು ಗಾಬರಿ ಕಾಡಲಿಲ್ಲ. ಈಜು ಆ ದಿನದಿಂದ ಸರಾಗವಾಯ್ತು ಹಾಗು ಎಲ್ಲೇ ನೀರಿಗೆ ಬಿದ್ರು ಸ್ವಲ್ಪ ಬುದ್ದಿ ಉಪಯೋಗಿಸಿದರೆ ಬದಕ್ಬಹುದು ಅನ್ನೋ ಧೈರ್ಯ ಬಂತು.

ಕಥೆಯ ನೀತಿ: ಕಲಿಕೆಯಲ್ಲಿ ಅಂಜಿಕೆ ಬಿಡಬೇಕು, ಛಲ ಹಾಗು ಧೃಡ ಮನಸಿರಬೇಕು, ಕೆಲಿಕೆಯಲ್ಲಿ ಸ್ವಲ್ಪ ಸಾಮಾನ್ಯ ಜ್ಞಾನ ಉಪಯೋಗಿಸುದ್ರೆ ಎಂಥ ಕಠಿಣ ಕಷ್ಟಗಳನ್ನು ಎದುರಿಸಬಹುದು.

-ಮಮು